   ಮೂಲದೊಡನೆ ಪರಿಶೀಲಿಸಿ

ಕೀರ್ತಿವರ್ಮ

ಕನ್ನಡದಲ್ಲಿ ಮೊತ್ತ ಮೊದಲ ವೈದ್ಯಗ್ರಂಥವಾದ ಗೋವೈದ್ಯದ ಕರ್ತೃ. ಈತನ ಕಾಲ ಕ್ರಿ.ಶ. 1,100 ಎಂದು ಕರ್ಣಾಟಕ ಕವಿಚರಿತೆಕಾರರ ಅಭಿಪ್ರಾಯ. ಈ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ ಎಸ್. ಲಕ್ಷ್ಮೀನಾರಾಯಣರಾಯರು ಈತನ ಕಾಲ ಕ್ರಿ.ಶ. 1080ರವರೆಗೆ ಇರಬಹುದೆಂದು ನಿಶ್ಚಯಿಸಿದ್ದಾರೆ.

ಜಿನನಾಪ್ತಂ ಗುರುದೇವಚಂದ್ರಮುನಿಪಂ ತ್ರೈಲೋಕ್ಯಮಲ್ಲಾಧಿಪಂ

ಜನಕಂ ಪಾಲಭವಂದ್ಯ... ... ... ...ವಾಕ್ಛ್ರೀವರಂ ವಿಕ್ರಮಾಂ

ಕನರೇಂದ್ರಂ ತನಗಗ್ರಜಾತನೆನಲಂತಾರ್ ನೋಂತರೀ ಕೀರ್ತಿವ-

ರ್ಮನರೇಂದ್ರಂಬರಮೆಂದು ಧಾತ್ರಿ ಪೊಗಛಿ್ಗುಂ ನಿಚ್ಚಂ

ಮಹೋತ್ಸಾಹದಿಂ ||

ಗೋವೈದ್ಯದಲ್ಲಿನ ಈ ಪದ್ಯದಿಂದ ಈತನ ತಂದೆ ತ್ರೈಲೋಕ್ಯ ಮಲ್ಲಾಧಿಪ, ಅಣ್ಣ ವಿಕ್ರಮಾಂಕ ನರೇಂದ್ರ. ಗುರು ದೇವಚಂದ್ರಮುನಿ, ಇಷ್ಟದೇವತೆ ಜಿನ ಎಂದು ತಿಳಿದು ಬರುತ್ತದೆ. ಇವನ ಸಮಕಾಲೀನ ಕವಿ ಬ್ರಹ್ಮಶಿವ ತನ್ನ ಸಮಯ ಪರೀಕ್ಷೆಯಲ್ಲಿ ಈತನನ್ನು ಹೀಗೆ ಹೊಗಳಿದ್ದಾನೆ;

ಜನತಾನಂದು ಚಳುಕ್ಯಾಭರಣನವನಿಪಾಳೋತ್ತಮಂ ಸಾರ್ವಭೌಮಂ |

ಜನಕಂ ತ್ರೈಲೋಕ್ಯಮಲ್ಲಂ ಸಕಳವಸುಮತೀವಲ್ಲಭಂ ವಿಕ್ರಮಾಂಕಾ ||

ವನಿಪಂ ತಾನಗ್ರಜಾತಂ ತ್ರಿಭುವನಪತಿ ದೇವಾಧಿದೇವಂ ಜಿನೇಂದ್ರಂ |

ತನಗಾಪ್ತಂ ಮತ್ತೆನಲ್ಕೇಂ ಪಿರಿಯನೊ ಜಗತೀನಾಥರೊಳ್

ಕೀರ್ತಿವರ್ಮಂ ||

ಅರಸುಮಗಂ ಗಡ ಕವಿ ಗಡ

ಪಿರಿದೀವಂ ಗಡ ಬಛಿುಕ್ಕೆ ಜೈನಂ ಗಡೆನಲ್

ಧರಣಿಪತಿ ಕೀರ್ತಿವರ್ಮಂ

ನಿರತಂ ಪೊನ್ ಕಮ್ಮಿತಾದುದೆನಿಸಿದನಿಳೆಯೊಳ್||

ಇದರಿಂದ ಕೀರ್ತಿವರ್ಮ ಚಾಳುಕ್ಯ ರಾಜರ ವಂಶದಲ್ಲಿ ಹುಟ್ಟಿದವನೆಂದು ವ್ಯಕ್ತವಾಗುತ್ತದೆ. ಆ ರಾಜರಲ್ಲಿ ತ್ರೈಲೋಕ್ಯಮಲ್ಲ 1042ರಿಂದ 1068 ರವರೆಗೆ ಆಳಿದಂತೆಯೂ ಅವನ ಮಗನಾದ ವಿಕ್ರಮಾದಿತ್ಯ 1076ರಿಂದ 1126ರವರೆಗೆ ಆಳಿದಂತೆಯೂ ತಿಳಿಯುತ್ತದೆ. ಈ ವಿಕ್ರಮಾದಿತ್ಯನೇ ಕವಿಯ ಅಣ್ಣನಾಗಿದ್ದಿರಬೇಕು. ವಿಕ್ರಮಾದಿತ್ಯನಿಗೆ ಮೂರನೆಯ ಜಯಸಿಂಹ, ವಿಷ್ಣುವರ್ಧನ ವಿಜಯಾದಿತ್ಯರೆಂಬ ಇಬ್ಬರು ತಮ್ಮಂದಿರಿದ್ದರು. ಕೀರ್ತಿವರ್ಮ ಎಂಬುದು ವಿಷ್ಣುವರ್ಧನ ವಿಜಯಾದಿತ್ಯನ ಮತ್ತೊಂದು ಹೆಸರೆಂದು ಎಸ್. ಲಕ್ಷ್ಮೀನಾರಾಯಣರ ಅಭಿಮತ.

ಗೊವೈದ್ಯ ಕನ್ನಡದಲ್ಲಿ ರಚಿತವಾದ ಮೊತ್ತಮೊದಲಿನ ವ್ಯೆದ್ಯಗ್ರಂಥ. ಇದರ ಓಲೆಗರಿ ಪ್ರತಿ ಅಸಮಗ್ರವೂ ಅಶುದ್ಧವೂ ಆಗಿದೆ ಎಂದು ಕರ್ಣಾಟಕ ಕವಿಚರಿತೆಕಾರರು ಹೇಳುತ್ತಾರೆ. ಇದು ಚಂಪೂಗ್ರಂಥ. ಇದರಲ್ಲಿ ಗೋವುಗಳ ವ್ಯಾಧಿಗಳಿಗೆ ಔಷಧಗಳನ್ನೂ ಯಂತ್ರಗಳನ್ನೂ ಬರೆಹಾಕುವ ಕ್ರಮಗಳನ್ನೂ ವಿಸ್ತಾರವಾಗಿ ಹೇಳಿದೆ. ಈ ಗ್ರಂಥದ ಮೊದಲ ಒಂದು ಪದ್ಯ ಹೀಗಿದೆ :

ಬಡವಂ ಕೊಬ್ಬಿದ ಬಂಜೆಯ

ನುಡುಗದೆ ಹಯಮಾಡಿ ಕ¾ುÂವ ತೆ¾ನಂ ಕುತ್ತಂ

ಬಿಡುವಂತು ವೈರಿಕರಿಹರಿ

ನುಡಿದಂ ಕಂದರ್ಪಮೂರ್ತಿ ಕೀರ್ತಿವಿಲಾಸಂ||

ಎರಡು ಪದ್ಯಗಳು ಹೀಗಿವೆ:

ಬಡಿಯದೆ ಭಾರಮಂ ಪಿರಿದನಿಕ್ಕದೆ ಮೇಹುಜ(ಲ)ಂಗಳೆಂಬಿವಂ

ಕುಡದವ¾ುÂಂದಕ್ಕಟಂ ಬರದು ನೀಳದೆ ಕಾಯದೆ ಗೋಕುಲಂಗಳಂ

ಬಡವನ¾ುÂಯದಂತು ಕಡುಗರುವಿಸಮಾನರಾಯಂ ಲಕ್ಷ್ಮಿಯ(ಂ)

ಸಡೆದ(ಪ)ರೆಂದು ಪೇ¿ದಿನುದಿತೋತ್ಸವದಿಂ ಬುಧಭವ್ಯಬಾಂಧವಂ

ಅಧಿಕಂ ರಕ್ತಪ್ರಭಂ ಕಾಲಚನನಮರ್ದಿರೆ ಅಂತಸ್ತಸತ್ಪ್ರಾ

ಣದಜೀವಧನಂ ನೋಡಲ್ ಬಹಿಃಪ್ರಾಣಮುನಡೆನಿದಾನಂ ಜಗಕ್ಕೆಂದು ಕಾವ್ಯಂ

ಬುದೊಸದವೈದ್ಯರತ್ನಂ ದೆಸೆದೆಸೆಗೆಸೆಯಲ್ ಪೇ¿ದಿನುತ್ಸಾಹದಿಂ ತೋತ್ಸವದಿಂ ಮಿ

ತಧರಾವಿಕ್ಕದರಪಾಲಭವಂದ್ಯಂ ಸಹಜಕವಿಜಿತೋತ್ಸಾಹನಂ ಕೀರ್ತಿಚಂದ್ರಂ

ಈ ಕವಿ ಕೀರ್ತಿಚಂದ್ರ, ವೈರಿಕರಿಹರಿ, ಕಂದರ್ಪಮೂರ್ತಿ, ರತ್ನಾಕರ, ಬುಧಭವ್ಯ ಬಾಂಧವ, ವೈದ್ಯರತ್ನ, ಪಾಲಭವಂದ್ಯ, ಕವಿತಾಬ್ಧಿಚಂದ್ರಮ, ಕೀರ್ತಿವಿಲಾಸ-ಎಂದು ಮೊದಲಾದ ಪ್ರಶಸ್ತಿಗಳಿಂದಲೂ ಬಿರುದುಗಳಿಂದಲೂ ತನ್ನನ್ನು ವಿಶ್ಲೇಷಿಸಿ ಕೊಂಡಿದ್ದಾನೆ.

 

(ಜಿ.ಸಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ